ಅಭಿಪ್ರಾಯ / ಸಲಹೆಗಳು

ಚಟುವಟಿಕೆಗಳು

ಕೇಂದ್ರ ಪರಿಹಾರ ಸಮಿತಿ

ಮಾಗಡಿ ಮುಖ್ಯ ರಸ್ತೆ, ಬೆಂಗಳೂರು

   ಸ್ವೀಕರಣ ಕೇಂದ್ರಗಳು

 

         ಕೇಂದ್ರ ಪರಿಹಾರ ಸಮಿತಿಯು, ಭಿಕ್ಷುಕರ ಸ್ವೀಕರಣೆ ಮತ್ತು ಅವರನ್ನು ತಾತ್ಕಾಲಿಕವಾಗಿ ಇಟ್ಟುಕೊಳ್ಳುವುದಕ್ಕಾಗಿ ಸ್ವೀಕರಣಾ ಕೇಂದ್ರಗಳನ್ನು ಒದಗಿಸಬಹುದು ಅಥವಾ ಅದು, ಅಧಿಸೂಚನೆಯ ಮೂಲಕ ಯಾವುದೇ ಸಂಸ್ಥೆಯನ್ನು ಈ ಅಧಿನಿಯಮದ ಉದ್ದೇಶಗಳಿಗಾಗಿ ಸ್ವೀಕರಣಾ ಕೇಂದ್ರ ಎಂಬುದಾಗಿ ಘೋಷಿಸಬಹುದು.

 

  ಪರಿಹಾರ ಕೇಂದ್ರಗಳು

 

        ಕೇಂದ್ರ ಪರಿಹಾರ ಸಮಿತಿಯು ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 3ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸುವ ವ್ಯಕ್ತಿಗಳನ್ನು ಮತ್ತು ಅಲ್ಲಿಗೆ ಕಳುಹಿಸುವವರನ್ನು ಬಂಧನ, ಪರಿಹಾರ ಮತ್ತು ಪುನರ್ವಸತಿಗಾಗಿ ಅವಶ್ಯವೆಂದು ಭಾವಿಸುವಂಥ ಸ್ಥಳಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸಬಹುದು ಅಥವಾ ಅದು ಅಸ್ತಿತ್ವದಲ್ಲಿರುವ ಯಾವುದೇ ಸಂಸ್ಥೆಯನ್ನು ಅಧಿಸೂಚನೆಯ ಮೂಲಕ ಪರಿಹಾರ ಕೇಂದ್ರ ಎಂಬುದಾಗಿ ಘೋಷಿಸಬಹುದು.

 

 ಸಂಸ್ಥೆಗಳ ವ್ಯವಸ್ಥಾಪನೆ

 

       ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975ರ ಉಪಬಂಧಗಳಿಗೊಳಪಟ್ಟು, ಕೇಂದ್ರ ಪರಿಹಾರ ಸಮಿತಿಯು, ಸಂಸ್ಥೆಗಳ ಸರಿಯಾದ ವ್ಯವಸ್ಥಾಪನೆಗಾಗಿ ಮತ್ತು ಅದರಲ್ಲಿರುವ ನಿವಾಸಿಗಳ ರಕ್ಷಣೆಗಾಗಿ ವ್ಯವಸ್ಥೆ ಮಾಡತಕ್ಕದ್ದು.

 

ಪ್ರಕ್ರಿಯೆ ಮತ್ತು ದಂಡನೆಗಳು

 

 

 ದಸ್ತಗಿರಿ ಮತ್ತು ವಿಚಾರಣೆ:-

 ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ 3 ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸುವ ಮಗುವನ್ನು ಹೊರತುಪಡಿಸಿ ಯಾವನೇ ಇತರ ವ್ಯಕ್ತಿಯನ್ನು ಕಾಣುವ ಯಾವನೇ ಪೊಲೀಸ್ ಅಧಿಕಾರಿ ಅಥವಾ ಈ ಬಗ್ಗೆ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಸರ್ಕಾರವು ಅಧಿಕೃತಗೊಳಿಸಬಹುದಾದಂಥ ಇತರ ಅಧಿಕಾರಿಯು ಅಂಥ ವ್ಯಕ್ತಿಯನ್ನು ದಸ್ತಗಿರಿ ಮಾಡತಕ್ಕದ್ದು ಮತ್ತು ಅಂಥ ದಸ್ತಗಿರಿಗಾಗಿನ ಕಾರಣಗಳನ್ನು ಅವನಿಗೆ ತಿಳಿಸತಕ್ಕದ್ದು ಮತ್ತು ಅವನನ್ನು ಕೂಡಲೇ ಅತಿ ಸಮೀಪದ ಸ್ವೀಕರಣ ಕೇಂದ್ರಕ್ಕೆ ಸ್ಥಳಾಂತರಿಸತಕ್ಕದ್ದು.

    ಸ್ವೀಕರಣ ಕೇಂದ್ರದ ಪ್ರಭಾರದಲ್ಲಿರುವ ಅಧಿಕಾರಿಯು ಆ ತರುವಾಯ ವಿಳಂಬವಿಲ್ಲದೆ ನಿಯಮಿಸಬಹುದಾದಂಥ ವಿಚಾರಣೆಯನ್ನು ನಡೆಸತಕ್ಕುದು ಮತ್ತು ಬಿಡುಗಡೆ ಮಾಡಿದರೆ ಆ ವ್ಯಕ್ತಿಯು ಭಿಕ್ಷೆ ಬೇಡುವುದನ್ನು ಆಶ್ರಯಿಸುವುದಿಲ್ಲವೆಂದು ಮನದಟ್ಟು ಮಾಡಿಕೊಂಡರೆ, ಅವನನ್ನು ತಕ್ಷಣವೇ ಜಾಮೀನು ಸಹಿತ ಅಥವಾ ಜಾಮೀನಿಲ್ಲದೆ ಬಿಡುಗಡೆ ಮಾಡತಕ್ಕದ್ದು.

  •  ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ (1)ನೇ ಉಪ-ಪ್ರಕರಣದ ಮೇರೆಗೆ ದಸ್ತಗಿರಿ ಮಾಡಿದ ವ್ಯಕ್ತಿಯನ್ನು (2)ನೇ ಉಪ-ಪ್ರಕರಣದ ಮೇರೆಗೆ ತಕ್ಷಣವೇ ಬಿಡುಗಡೆ ಮಾಡದಿದ್ದರೆ, ಸ್ವೀಕರಣ ಕೇಂದ್ರದ ಪ್ರಭಾರದಲ್ಲಿರುವ ಅಧಿಕಾರಿಯು ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಥವಾ ಮಹಾನಗರ ಮ್ಯಾಜಿಸ್ಟ್ರೇಟ್‍ನ ಮುಂದೆ ದಸ್ತಗಿರಿ ಮಾಡಿದ ಸ್ಥಳದಿಂದ ಅಂಥ ಮ್ಯಾಜಿಸ್ಟ್ರೇಟ್‍ನ ನ್ಯಾಯಾಲಯಕ್ಕೆ ಪ್ರಯಾಣ ಮಾಡಲು ಅವಶ್ಯವಾದ ಕಾಲವನ್ನು ಹೊರತುಪಡಿಸಿ ಅಂಥ ದಸ್ತಗಿರಿಯ ಇಪ್ಪತ್ತನಾಲ್ಕು ಗಂಟೆಗಳ ಅವಧಿಯೊಳಗಾಗಿ ಹಾಜರುಪಡಿಸತಕ್ಕದ್ದು. ಪರಂತು, (1) ನೇ ಉಪ-ಪ್ರಕರಣದ ಮೇರೆಗೆ ದಸ್ತಗಿರಿ ಮಾಡಿದ ಯಾವನೇ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್‍ನ ಅಧಿಕಾರವಿಲ್ಲದೆ ಸದರಿ ಅವಧಿಯನ್ನು ಮೀರಿ ಅಭಿರಕ್ಷೆಯಲ್ಲಿ ಬಂಧಿಸಿಡತಕ್ಕುದಲ್ಲ.

 

  •  ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ (3) ನೇ ಉಪಪ್ರಕರಣದ ಮೇರೆಗೆ ಯಾವ ಮ್ಯಾಜಿಸ್ಟ್ರೇಟ್‍ನ ಮುಂದೆ ವ್ಯಕ್ತಿಯನ್ನು ಹಾಜರುಪಡಿಸಲಾಗಿದೆಯೋ ಆ ಮ್ಯಾಜಿಸ್ಟ್ರೇಟ್‍ನು ವಿಚಾರಣೆಯನ್ನು ನಡೆಸತಕ್ಕದ್ದು ಮತ್ತು ಅಂಥ ವ್ಯಕ್ತಿಯು ಭಿಕ್ಷೆ ಬೇಡುವ ಅಪರಾಧವನ್ನು ಮಾಡಿರುವನೆಂದು ಅವನಿಗೆ ಮನದಟ್ಟಾದರೆ, ಆದರೆ ಅವನು ಅಂಥ ಅಪರಾಧವನ್ನು ಮಾಡುವುದಿಲ್ಲವೆಂದು ಮಾತು ಕೊಟ್ಟರೆ ಅವನು ಬಂಧಪತ್ರವನ್ನು ಒದಗಿಸಿದ ಮೇಲೆ ಅವನನ್ನು ಬಿಡುಗಡೆ ಮಾಡತಕ್ಕದ್ದು.

  •  ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975 ರ (4) ನೇ ಉಪ-ಪ್ರಕರಣದ ಮೇರೆಗೆ ಬಿಡುಗಡೆಯಾದ ಯಾವನೇ ವ್ಯಕ್ತಿಯನ್ನು ಅಂಥದೇ ಅಪರಾಧಕ್ಕಾಗಿ ಯಾವನೇ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಥವಾ ಮಹಾನಗರ ಮ್ಯಾಜಿಸ್ಟ್ರೇಟ್ ಮುಂದೆ ಪುನಃ ಹಾಜರುಪಡಿಸಿದರೆ ಮತ್ತು 3ನೇ ಪ್ರಕರಣದ ಉಲ್ಲಂಘನೆಯನ್ನು ಅವನ ವಿರುದ್ಧ ರುಜುವಾತುಪಡಿಸಿದರೆ, ಜಾಮೀನಿಲ್ಲದೆ ಅವನನ್ನು ಬಿಡುಗಡೆ ಮಾಡತಕ್ಕುದಲ್ಲ.

 

 

 ಮ್ಯಾಜಿಸ್ಟ್ರೇಟ್‍ನು ಭಿಕ್ಷುಕನನ್ನು ಪರಿಹಾರ ಕೇಂದ್ರಕ್ಕೆ ಕಳುಹಿಸತಕ್ಕದ್ದು:-

 

(1) ಯಾವ  ವ್ಯಕ್ತ್ತಿಯ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆಯೋ ಆ ವ್ಯಕ್ತಿಯನ್ನು ಅಂಥದೇ ಅಪರಾಧಕ್ಕಾಗಿ ಅಥವಾ ಅಂಥ ವ್ಯಕ್ತಿಯು ಸದರಿ ಪ್ರಕರಣದಲ್ಲಿ ಒಳಗೊಂಡ ನಿರ್ದೇಶನಗಳನ್ನು ಪಾಲಿಸುವುದಿಲ್ಲವೆಂದು ಅಥವಾ ಪಾಲಿಸಲು ಅಸಮರ್ಥನಾಗಿರುವನೆಂಬ ಕಾರಣದ ಮೇಲೆ ಪುನಃ ಮ್ಯಾಜಿಸ್ಟ್ರೇಟ್‍ನ ಮುಂದೆ ಹಾಜರುಪಡಿಸಿದರೆ ಮತ್ತು ಮ್ಯಾಜಿಸ್ಟ್ರೇಟ್‍ನು ವಿಚಾರಣೆ ನಡೆಸಿದ ಮೇಲೆ ಆ ವ್ಯಕ್ತಿಯು 3ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸಿರುವನೆಂದು ನಿರ್ಣಯಿಸಿದರೆ ಅವನು ಅವನನ್ನು ಅಪರಾಧಿ ಎಂದು ನಿರ್ಣಯಿಸತಕ್ಕದ್ದು ಮತ್ತು ಆ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಹನ್ನೆರಡು ತಿಂಗಳುಗಳನ್ನು ಮೀರದಂಥ ಅವಧಿಗಾಗಿ ಅತಿ ಸಮೀಪದ ಪರಿಹಾರ ಕೇಂದ್ರದಲ್ಲಿ ಬಂಧನದಲ್ಲಿರಿಸುವ ಶಿಕ್ಷೆಯನ್ನು ಕೊಡತಕ್ಕದ್ದು.

     (2) (1) ನೇ ಉಪ-ಪ್ರಕರಣದ ಮೇರೆಗೆ ಮ್ಯಾಜಿಸ್ಟ್ರೇಟ್‍ನು ಮಾಡಿದ ಬಂಧನದ ಆದೇಶವನ್ನು ಯಾವುದೇ ಕಾಲದಲ್ಲಿ ರದ್ದುಗೊಳಿಸಬಹುದು ಅಥವಾ ಮಾರ್ಪಾಟು ಮಾಡಬಹುದು. ದುರ್ಬಲರಾದ, ಅಶಕ್ತರಾದ ಮತ್ತು ಉಡುಗಿಹೋದ ಭಿಕ್ಷುಕರು ಮತ್ತು ವಾಸಿಯಾಗದ ಯಾವುದೇ ರೋಗದಿಂದ ನರಳುತ್ತಿರುವ ವ್ಯಕ್ತಿಗಳನ್ನು ದಸ್ತಗಿರಿ ಮಾಡತಕ್ಕುದು ಮತ್ತು ಸ್ವೀಕರಣ ಕೇಂದ್ರಗಳಿಗೆ ಕಳುಹಿಸತಕ್ಕುದು:-

   (1) ಮಗುವನ್ನು ಹೊರತುಪಡಿಸಿ, ಯಾವನೇ ಇತರ ವ್ಯಕ್ತಿಯು ದುರ್ಬಲ, ಅಶಕ್ತ, ಉಡುಗಿಹೋಗಿರುವನೆಂದು ಅಥವಾ ಯಾವುದೇ ಅಸಹ್ಯಕರ ಅಥವಾ ವಾಸಿಯಾಗದ ರೋಗದಿಂದ ನರಳುತ್ತಿರುವನೆಂದು ನಿರ್ಣಯಿಸಿದರೆ, ಅವನು ಆ ವ್ಯಕ್ತಿಯಿಂದ ಅವನಿಗೆ ಬಂಧುಗಳು ಯಾರಾದರೂ ಇದ್ದಾರೆಯೇ ಎಂದು ಖಚಿತಪಡಿಸಿ ಕೊಳ್ಳತಕ್ಕುದು ಮತ್ತು ಯಾರಾದರೂ ಇದ್ದರೆ ಅವರನ್ನು ಕೂಡಲೇ ಕರೆಯಿಸತಕ್ಕುದು ಮತ್ತು ವಿಚಾರಣೆಯ ತರುವಾಯ ಅವನಿಗೆ ಆ ವ್ಯಕ್ತಿಯನ್ನು ರಕ್ಷಿಸಲಾಗುವುದಿಲ್ಲವೆಂದು ಕಂಡುಬಂದರೆ ಅಥವಾ ಬಂಧುಗಳು ಯಾರೂ ಇಲ್ಲದಿದ್ದರೆ ಸ್ವೀಕರಣ ಕೇಂದ್ರದ ಪ್ರಭಾರದಲ್ಲಿರುವ ಅಧಿಕಾರಿಯು ಅವನ ವಿಚಾರಣೆಯ ವರದಿಯೊಂದಿಗೆ ಕೂಡಲೇ ಅವನನ್ನು ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಥವಾ ಮಹಾನಗರ ಮ್ಯಾಜಿಸ್ಟ್ರೇಟ್‍ನ ಮುಂದೆ ದಸ್ತಗಿರಿ ಮಾಡಿದ ಸ್ಥಳದಿಂದ ಅಥವಾ ಮ್ಯಾಜಿಸ್ಟ್ರೇಟ್‍ನ ನ್ಯಾಯಾಲಯಕ್ಕೆ ಪ್ರಯಾಣ ಮಾಡಲು ಅವಶ್ಯವಾದ ಕಾಲವನ್ನು ಹೊರತುಪಡಿಸಿ, ಅವನನ್ನು ದಸ್ತಗಿರಿ ಮಾಡಿದ ಇಪ್ಪತ್ನಾಲ್ಕು ಗಂಟೆಗಳ ಅವಧಿಯೊಳಗೆ ಹಾಜರುಪಡಿಸತಕ್ಕದ್ದು.

          ಪರಂತು, ದಸ್ತಗಿರಿ ಮಾಡಿದ ಯಾವನೇ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್‍ನ ಅಧಿಕಾರವಿಲ್ಲದೆ ಇಪ್ಪತ್ನಾಲ್ಕು ಗಂಟೆಗಳ ಅವಧಿಯನ್ನು ಮೀರಿ ಅಭಿರಕ್ಷೆಯಲ್ಲಿ ಬಂಧಿಸಿಡತಕ್ಕುದಲ್ಲ.

         (2) ಮ್ಯಾಜಿಸ್ಟ್ರೇಟ್‍ನ ಮುಂದೆ ಹಾಜರುಪಡಿಸಿದ ವ್ಯಕ್ತಿಯು ಅಂಥ ಮ್ಯಾಜಿಸ್ಟ್ರೇಟ್‍ನು ವಿಚಾರಣೆ ಮಾಡಿದ ಮೇಲೆ 3ನೇ ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸಿರುವುದಾಗಿ ಕಂಡುಬಂದರೆ ಮ್ಯಾಜಿಸ್ಟ್ರೇಟ್‍ನು, ಅವನನ್ನು ಅಪರಾಧಿ ಎಂದು ನಿರ್ಣಯಿಸತಕ್ಕುದು ಮತ್ತು ಆ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಹನ್ನೆರಡು ತಿಂಗಳುಗಳಿಗೆ ಮೀರದ ಅವಧಿಗಾಗಿ ಅತಿ ಸಮೀಪದ ಪರಿಹಾರ ಕೇಂದ್ರದಲ್ಲಿ ಬಂಧನದಲ್ಲಿಡುವ ಶಿಕ್ಷೆಯನ್ನು ಕೊಡತಕ್ಕುದು ಮತ್ತು ಮ್ಯಾಜಿಸ್ಟ್ರೇಟ್‍ನು ಮಾಡಿದ ಬಂಧನದ ಆದೇಶವನ್ನು ಅಂಥ ಮ್ಯಾಜಿಸ್ಟ್ರೇಟ್‍ನು ಯಾವುದೇ ಕಾಲದಲ್ಲಿ ರದ್ದುಗೊಳಿಸಬಹುದು ಅಥವಾ ಮಾರ್ಪಾಡು ಮಾಡಬಹುದು.

 

  ಕುಷ್ಟರೋಗಿಗಳು ಮತ್ತು ಮನೋವಿಕಲರ ವೈದ್ಯಕೀಯ ಪರೀಕ್ಷೆ ಮತ್ತು ಬಂಧನ:-

 

(1) ಮ್ಯಾಜಿಸ್ಟ್ರೇಟ್‍ನ ಯಾವುದೇ ಆದೇಶದ ಮೇರೆಗೆ ಸಂಸ್ಥೆಯಲ್ಲಿ ಬಂಧನದಲ್ಲಿಟ್ಟಿರುವ ಯಾವನೇ ಭಿಕ್ಷುಕನು, ಅಸ್ವಸ್ತಚಿತ್ತ ಅಥವಾ ಕುಷ್ಠರೋಗದಿಂದ ನರಳುತ್ತಿರುವನೆಂದು ಸರ್ಕಾರಕ್ಕೆ ಕಂಡುಬಂದಲ್ಲಿರುವಲ್ಲಿ ಸರ್ಕಾರವು ಭಿಕ್ಷುಕನು ಅಸ್ವಸ್ತ ಚಿತ್ತನಾಗಿರುವನೆಂದು ಅಥವಾ ಕುಷ್ಠರೋಗದಿಂದ ನರಳುತ್ತಿರುವನೆಂಬುದಕ್ಕಾಗಿನ ಕಾರಣಗಳನ್ನು ನಿರೂಪಿಸಿ ಆದೇಶದ ಮೂಲಕ ಅವನನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಅಥವಾ ಕುಷ್ಠರೋಗಿಗಳ ರಕ್ಷಣಾಲಯಕ್ಕೆ ಅಥವಾ ಇತರ ಸಂರಕ್ಷಿತ ಅಭಿರಕ್ಷೆಯ ಇತರ ಸ್ಥಳಕ್ಕೆ ಅವನನ್ನು ಸ್ಥಳಾಂತರಿಸುವಂತೆ ಮತ್ತು ಅಲ್ಲಿ ಯಾವ ಅವಧಿಗಾಗಿ ಅವನನ್ನು ಬಂಧನದಲ್ಲಿಡಲು ಆದೇಶಿಸಲಾಗಿರುವಂಥ ಉಳಿದ ಅವಧಿಯಲ್ಲಿ ಸರ್ಕಾರವು ನಿರ್ದೇಶಿಸುವಂತೆ ಅಥವಾ ಆ ಅವಧಿಯು ಮುಕ್ತಾಯವಾದ ಮೇಲೆ ಭಿಕ್ಷುಕನು ಅಥವಾ ಇತರರ ಸುರಕ್ಷತೆಗಾಗಿ ಅವನನ್ನು ವೈದ್ಯಕೀಯ ರಕ್ಷಣೆಯಲ್ಲಿ ಅಥವಾ ಚಿಕಿತ್ಸೆಯಲ್ಲಿ ಇನ್ನೂ    ಬಂಧನದಲ್ಲಿರುವುದು ಅವಶ್ಯವೆಂದು ವೈದ್ಯಾಧಿಕಾರಿಯು ಪ್ರಮಾಣೀಕರಿಸಿದರೆ ಆಗ ಅವನನ್ನು ಕಾನೂನಿಗನುಸಾರವಾಗಿ ಬಿಡುಗಡೆ ಮಾಡುವವರೆಗೆ ಅಲ್ಲಿ ಇಟ್ಟುಕೊಂಡಿರಲು ಮತ್ತು ಚಿಕಿತ್ಸೆ ಮಾಡಲು ಆದೇಶಿಸಬಹುದು.

 (2) ಭಿಕ್ಷುಕರ ಅಸ್ವಸ್ಥ ಚಿತ್ತತೆಯು ಕೊನೆಗೊಂಡಿರುವುದೆಂದು ಅಥವಾ ಕುಷ್ಠರೋಗವು ವಾಸಿಯಾಗಿದೆಯೆಂದು ಸರ್ಕಾರಕ್ಕೆ ಕಂಡುಬಂದಿರುವಲ್ಲಿ, ಸರ್ಕಾರವು ಭಿಕ್ಷುಕನ ವಶವನ್ನು ಹೊಂದಿರುವ ವ್ಯಕ್ತಿಗೆ ಅವನನ್ನು ಅಭಿರಕ್ಷೆಯಲ್ಲಿಡಲು ಇನ್ನೂ ಗುರಿಯಾಗಿದ್ದರೆ, ಅವನನ್ನು ಯಾವ ಸಂಸ್ಥೆಯಿಂದ ಸ್ಥಳಾಂತರಿಸಲಾಯಿತೋ ಆ ಸಂಸ್ಥೆಗೆ ಕಳುಹಿಸಲು ಅಥವಾ ಭಿಕ್ಷುಕನನ್ನು ಇನ್ನೂ ಅಭಿರಕ್ಷೆಯಲ್ಲಿಡಲು ಅವನು ಗುರಿಯಾಗಿಲ್ಲದಿದ್ದರೆ, ಅವನನ್ನು ಬಿಡುಗಡೆ ಮಾಡಲು ಆದೇಶಿಸಲು ಆದೇಶದ ಮೂಲಕ ನಿರ್ದೇಶಿಸತಕ್ಕುದು.

 (3) ಮನೋವಿಕಲತಾ ಅಧಿನಿಯಮ 1912 (ಕೇಂದ್ರ ಅಧಿನಿಯಮ, 1912ರ 4) 31ನೇ ಪ್ರಕರಣದ ಅಥವಾ ಕುಷ್ಠರೋಗಿಗಳ ಅಧಿನಿಯಮ 1898ರ (ಕೇಂದ್ರ ಅಧಿನಿಯಮ 1898ರ 3) 14ನೇ ಪ್ರಕರಣದ ಉಪಬಂಧಗಳು ಅಥವಾ ರಾಜ್ಯದ ಯಾವುದೇ ಪ್ರದೇಶದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಸಂವಾದಿ ಉಪಬಂಧವು, ಅವನನ್ನು ಬಂಧನದಲ್ಲಿಡಬೇಕೆಂದು ಆದೇಶಿಸಿರುವಂಥ ಅವಧಿಯು ಮುಕ್ತಾಯವಾದ ತರುವಾಯ (i) ನೇ ಉಪ-ಪ್ರಕರಣದ ಮೇರೆಗೆ ಮಾನಸಿಕ ರೋಗಿಗಳ ಆಸ್ಪತ್ರೆ ಅಥವಾ ಕುಷ್ಠರೋಗಿಗಳ ರಕ್ಷಣಾಲಯದಲ್ಲಿ ಬಂಧಿಸಿಟ್ಟಿರುವ ಪ್ರತಿಯೊಬ್ಬ ಭಿಕ್ಷುಕನಿಗೂ ಅನ್ವಯಿಸತಕ್ಕದ್ದು ಮತ್ತು ಆ ಉಪ-ಪ್ರಕರಣದ ಮೇರೆಗೆ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಅಥವಾ ಕುಷ್ಠರೋಗಿಗಳ ರಕ್ಷಣಾಲಯದಲ್ಲಿ ಭಿಕ್ಷುಕನನ್ನು ಬಂಧಿಸಿಟ್ಟಿರುವಂಥ ಕಾಲವನ್ನು ಅವನನ್ನು ಬಂಧನದಲ್ಲಿಡಬೇಕೆಂದು ಮ್ಯಾಜಿಸ್ಟ್ರೇಟ್‍ನು ಆದೇಶ ಮಾಡಬಹುದಾದಂಥ ಅವಧಿಯ ಭಾಗವೆಂದು ಪರಿಗಣಿಸತಕ್ಕುದು.

        ಪರಂತು, ಭಿಕ್ಷುಕನ ಅಸ್ವಸ್ಥ ಚಿತ್ತತೆ ಅಥವಾ ಕುಷ್ಠರೋಗದ ಕಾರಣದಿಂದಾಗಿ ಭಿಕ್ಷುಕನ ಸ್ಥಳಾಂತರಣವು ಕೂಡಲೇ ಅವಶ್ಯವಾಗಿರುವಲ್ಲಿ ಭಿಕ್ಷುಕನನ್ನು ಬಂಧನದಲ್ಲಿಟ್ಟಿರುವಂಥ ಸಂಸ್ಥೆಯ ಪ್ರಾಧಿಕಾರಿಗಳಿಗೆ ಮನೋವಿಕಲತಾ ಅಧಿನಿಯಮ,  1912 (ಕೇಂದ್ರಾಧಿನಿಯಮ 1912ರ 4) ಅಥವಾ ಕುಷ್ಠರೋಗಿಗಳ ಅಧಿನಿಯಮ, 1898ರ (ಕೇಂದ್ರ ಅಧಿನಿಯಮ 1898ರ 3) ಮೇರೆಗೆ ಅಥವಾ ರಾಜ್ಯದ ಯಾವುದೇ ಪ್ರದೇಶದಲ್ಲಿ ಜಾರಿಯಲ್ಲಿರುವ ಯಾವುದೇ ಸಂವಾದಿ ಕಾನೂನಿನ ಮೇರೆಗೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯಕ್ಕೆ ಈ ವಿಷಯದಲ್ಲಿ ಸರ್ಕಾರದ ಆದೇಶವನ್ನು ಪಡೆಯಬಹುದಾದಂಥ ಕಾಲದವರೆಗೆ ಅವನನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಅಥವಾ ಕುಷ್ಠರೋಗಿಗಳ ರಕ್ಷಣಾಲಯಕ್ಕೆ ಒಪ್ಪಿಸಲು ಕೂಡಲೇ ಆದೇಶ ಮಾಡುವುದಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರತಕ್ಕುದು.   ಬಿಡುಗಡೆಯಾದ ಮೇಲೆ ಅಥವಾ ಅನುಮತಿಯನ್ನು ಪಡೆದು ಭಿಕ್ಷುಕನು ಸಂಸ್ಥೆಯನ್ನು ಬಿಡತಕ್ಕುದು:- ಯಾವುದೇ ಸಂಸ್ಥೆಗೆ ಸೇರಿಸಲಾಗಿರುವ ಯಾವ ವ್ಯಕ್ತಿಯ ಬಿಡುಗಡೆಯ ಆದೇಶವಿಲ್ಲದೆ ಅಥವಾ ಸಂಸ್ಥೆಯ ಪ್ರಭಾರದಲ್ಲಿರುವ ಅಧಿಕಾರಿಯ ಬರಹದಲ್ಲಿನ ಅನುಮತಿ ಇಲ್ಲದೆ ಅದನ್ನು ಬಿಡತಕ್ಕುದಲ್ಲ.

 

ಪರಾರಿಯಾದ ಭಿಕ್ಷುಕರ ಬಗ್ಗೆ ಹೇಗೆ ವ್ಯವಹರಿಸತಕ್ಕುದು:-

 

1) ಪ್ರಕರಣವನ್ನು ಉಲ್ಲಂಘಿಸಿ ಅಂಥ ಸಂಸ್ಥೆಯನ್ನು ವ್ಯಕ್ತಿಯು ಬಿಟ್ಟಿದ್ದಾನೆಂದು ಯಾವುದೇ ಸಂಸ್ಥೆಯ ಪ್ರಭಾರದಲ್ಲಿರುವ ಅಧಿಕಾರಿಯು ವರದಿಯ ಮೇಲೆ ಯಾವನೇ  ಪೋಲೀಸ್  ಅಧಿಕಾರಿ  ಅಥವಾ ಈ  ಬಗ್ಗೆ ಸರ್ಕಾರವು  ಅಧಿಕೃತಗೊಳಿಸಬಹುದಾದಂಥ ಇತರ ಅಧಿಕಾರಿಯು ಅಂಥ ವ್ಯಕ್ತಿಯನ್ನು ವಾರಂಟಿಲ್ಲದೆ ದಸ್ತಗಿರಿ ಮಾಡತಕ್ಕುದು ಮತ್ತು ಅಂಥ ದಸ್ತಗಿರಿಗಾಗಿನ ಕಾರಣಗಳನ್ನು ಅವನಿಗೆ ತಿಳಿಸತಕ್ಕುದು ಮತ್ತು ಅವನು ಯಾವ ಸಂಸ್ಥೆಯನ್ನು ಬಿಟ್ಟಿದ್ದನೋ ಆ ಸಂಸ್ಥೆಗೆ ಕೂಡಲೇ ಅವನನ್ನು ಸ್ಥಳಾಂತರಿಸತಕ್ಕುದು.

  (2) ಸಂಸ್ಥೆಯ ಪ್ರಭಾರದಲ್ಲಿರುವ ಅಧಿಕಾರಿಯು, ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅಥವಾ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಥವಾ ಮಹಾನಗರ ಮ್ಯಾಜಿಸ್ಟ್ರೇಟ್‍ನ ಮುಂದೆ, ಅವನನ್ನು ದಸ್ತಗಿರಿಯಾದ ಸ್ಥಳದಿಂದ ಅಂಥ ಮ್ಯಾಜಿಸ್ಟ್ರೇಟ್‍ನ ನ್ಯಾಯಾಲಯಕ್ಕೆ ಪ್ರಯಾಣ ಮಾಡಲು ಅವಶ್ಯಕವಾದ ಕಾಲವನ್ನು ಹೊರತುಪಡಿಸಿ ಅಂಥ ದಸ್ತಗಿರಿಯಾದ ಇಪ್ಪತ್ನಾಲ್ಕು ಗಂಟೆಗಳ ಅವಧಿಯೊಳಗೆ, ಅವನನ್ನು ಹಾಜರುಪಡಿಸತಕ್ಕುದು ಮತ್ತು ಆ ಮ್ಯಾಜಿಸ್ಟ್ರೇಟ್‍ನು ಸದರಿ ವ್ಯಕ್ತಿಯು ಪ್ರಕರಣದ ಉಪಬಂಧಗಳನ್ನು ಉಲ್ಲಂಘಿಸಿದ್ದಾನೆಂದು ಮನದಟ್ಟಾದ ತರುವಾಯ ಎಚ್ಚರಿಕೆಯನ್ನು ಕೊಟ್ಟು ಅವನನ್ನು ಆ ಸಂಸ್ಥೆಗೆ ವರ್ಗಾವಣೆ ಮಾಡಬೇಕೆಂದು ಆದೇಶ ಕೊಡತಕ್ಕುದು.

   (3) ಯಾವನೇ ವ್ಯಕ್ತಿಯು ಅವನು ಬಿಡುಗಡೆಯಾದ ತರುವಾಯ ಪರಾರಿಯಾಗುವ ಅಥವಾ ಭಿಕ್ಷಾಟನೆಯನ್ನು ಅವಲಂಬಿಸುವನನ್ನು ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಥವಾ ಮಹಾನಗರ ಮ್ಯಾಜಿಸ್ಟ್ರೇಟ್‍ನ ಮುಂದೆ ಹಾಜರುಪಡಿಸತಕ್ಕುದು ಮತ್ತು ಅವನು ಕ್ಷಿಪ್ರ ಅಧಿವಿಚಾರಣೆಯ ತರುವಾಯ ಅವನನ್ನು ಅಪರಾಧಿ ಎಂದು ನಿರ್ಣಯಿಸಬಹುದು ಮತ್ತು ಮೂರು ತಿಂಗಳುಗಳಿಗೆ ಮೀರದ ಅವಧಿಗಾಗಿ ಅವನಿಗೆ ಕಾರಾವಾಸ ಶಿಕ್ಷೆಯನ್ನು ವಿಧಿಸತಕ್ಕುದು.

         ದುಷ್ಪ್ರೇರಕರನ್ನು ಕಾರಾವಾಸದಿಂದ ಅಥವಾ ಜುಲ್ಮಾನೆ ಅಥವಾ ಅವೆರಡರಿಂದಲೂ ದಂಡಿಸತಕ್ಕುದು:-  ಯಾವನೇ ವ್ಯಕ್ತಿಯನ್ನು ಭಿಕ್ಷೆ ಬೇಡುವುದಕ್ಕಾಗಿ ನಿಯೋಜಿಸಿಕೊಳ್ಳುವ ಅಥವಾ ನಿಯೋಜನೆಯನ್ನು ದುಷ್ಪ್ರೇರಿಸುವ ಯಾರೇ ಆಗಲಿ ಮ್ಯಾಜಿಸ್ಟ್ರೇಟ್‍ನಿಂದ ಅಪರಾಧಿ ಎಂದು ನಿರ್ಣೀತನಾದ ಮೇಲೆ ಮೂರು ತಿಂಗಳವರೆಗೆ ವಿಸ್ತರಿಸಬಹುದಾದ ಸಾದಾ ಅಥವಾ ಕಠಿಣ ಕಾರಾವಾಸದಿಂದ ಅಥವಾ ಮೂರು ನೂರು ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕುದು.

         ಸಂಸ್ಥೆಗೆ ಅಥವಾ ಮ್ಯಾಜಿಸ್ಟ್ರೇಟ್‍ನ ಬಳಿಗೆ ಹೋಗಲು ಭಿಕ್ಷುಕನು ನಿರಾಕರಿಸಿದರೆ ಕಾರಾವಾಸದಿಂದ ಅಥವಾ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡನೀಯವಾಗ ತಕ್ಕುದು:-  ಈ ಅಧಿನಿಯಮದ ಮೇರೆಗೆ ಅಗತ್ಯಪಡಿಸಿದಾಗ ಪೊಲೀಸ್ ಅಧಿಕಾರಿ ಅಥವಾ ಸರ್ಕಾರವು ಅಧಿಕೃತಗೊಳಿಸಿದ ಯಾವನೇ ಅಧಿಕಾರಿಯೊಂದಿಗೆ ಹೋಗಲು ಮ್ಯಾಜಿಸ್ಟ್ರೇಟ್‍ನ ಮುಂದೆ ಹಾಜರಾಗಲು ಅಥವಾ ಸಂಸ್ಥೆಗೆ ತೆಗೆದುಕೊಂಡು  ಹೋಗಲು  ನಿರಾಕರಿಸುವ ಅಥವಾ ತಪ್ಪುವ ಯಾವನೇ ಭಿಕ್ಷುಕನನ್ನು ಮ್ಯಾಜಿಸ್ಟ್ರೇಟ್‍ನು  ಅಪರಾಧಿಯೆಂದು ನಿರ್ಣಯಿಸಿದ ಮೇಲೆ ಒಂದು ತಿಂಗಳಿಗೆ ವಿಸ್ತರಿಸಬಹುದಾದಂಥ ಅವಧಿಗಾಗಿ ಸಾದಾ ಕಾರಾವಾಸದಿಂದ ಅಥವಾ ಐವತ್ತು ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ಭಿಕ್ಷುಕನು ದಂಡಿತನಾಗತಕ್ಕುದು.

 

        ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ವರ್ಗಾವಣೆ:- ಸರ್ಕಾರ ಅಥವಾ ಈ ಬಗ್ಗೆ ಸರ್ಕಾರವು ಅಧಿಕೃತಗೊಳಿಸಬಹುದಾದಂಥ ಇತರ ಅಧಿಕಾರಿಯು, ಸ್ವೀಕರಣ ಕೇಂದ್ರ ಅಥವಾ ಪರಿಹಾರ ಕೇಂದ್ರದಲ್ಲಿ ಅಥವಾ ಯಾವುದೇ ಇತರೆ ಸಂಸ್ಥೆಯಲ್ಲಿ ಬಂಧಿಸಿಟ್ಟ ಯಾವನೇ ವ್ಯಕ್ತಿಯನ್ನು ಅಲ್ಲಿಂದ ರಾಜ್ಯದಲ್ಲಿರುವ ಅಂಥದೇ ಸ್ವರೂಪದ ಇನ್ನೊಂದು ಸ್ವೀಕರಣ ಕೇಂದ್ರ, ಪರಿಹಾರ ಕೇಂದ್ರ ಅಥವಾ ಸಂಸ್ಥೆಗೆ ವರ್ಗಾಯಿಸಬೇಕೆಂದು ನಿರ್ದೇಶಿಸಬಹುದು;      ಪರಂತು, ಅಂಥ ವ್ಯಕ್ತಿಯ ಬಂಧನದ ಒಟ್ಟು ಅವಧಿಯು ಯಾವುದೇ ಸಂದರ್ಭದಲ್ಲಿ ಅಂಥ ವರ್ಗಾವಣೆಯಿಂದ ಹೆಚ್ಚಿಗೆಯಾಗತಕ್ಕುದಲ್ಲ.

 

ಭಿಕ್ಷುಕರ ತಾತ್ಕಾಲಿಕ ಬಿಡುಗಡೆ

 

(1) ಸರ್ಕಾರ ಅಥವಾ ಈ ಬಗ್ಗೆ ಸರ್ಕಾರವು ಅದರ ಅಧಿಕಾರವನ್ನು ಪ್ರತ್ಯಾಯೋಜಿಸಬಹುದಾದಂಥ ಯಾವನೇ ಪ್ರಾಧಿಕಾರಿಯು ನಿಯಮಿಸಬಹುದಾದಂಥ ಷರತ್ತುಗಳಿಗೊಳಪಟ್ಟು, ಭಿಕ್ಷುಕನ ಕುಟುಂಬದ ಯಾವನೇ ಸದಸ್ಯನ ಅಥವಾ ಅವನ ಅತಿ ಸಮೀಪದ ಯಾವನೇ ಬಂಧುವಿನ ಯಾವುದೇ ತೀವ್ರ ಅನಾರೋಗ್ಯ ಅಥವಾ ಮರಣದ ಸಂದರ್ಭದಲ್ಲಿ ಅಥವಾ ಯಾವುದೇ ಇತರ ಸಾಕಷ್ಟು ಕಾರಣಕ್ಕಾಗಿ, ಪರಿಹಾರ ಕೇಂದ್ರದಲ್ಲಿ ಬಂಧನದಲ್ಲಿಟ್ಟ ಯಾವನೇ ಭಿಕ್ಷುಕನನ್ನು ಅದು ಅವಶ್ಯವೆಂದು ಭಾವಿಸುವಂಥ ಅವಧಿಗಾಗಿ ಪೆರೋಲಿನ ಮೇಲೆ ಬಿಡುಗಡೆ ಮಾಡಬಹುದು.

  (2) ಭಿಕ್ಷುಕನ ಬಿಡುಗಡೆಯ ಅವಧಿಯನ್ನು ಪರಿಹಾರ ಕೇಂದ್ರದಲ್ಲಿ ಅವನ ಬಂಧನದ ಒಟ್ಟು ಅವಧಿಯ ಬಗ್ಗೆ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕುದಲ್ಲ.

 

  ಬೇಷರತ್ತಾಗಿ ಭಿಕ್ಷುಕರ ಬಿಡುಗಡೆ:-

 

            ಪರಿಹಾರ ಕೇಂದ್ರದಲ್ಲಿ ಭಿಕ್ಷುಕನನ್ನು ಬಂಧಿಸಿಟ್ಟ ದಿನಾಂಕದಿಂದ ಮೂರು ತಿಂಗಳುಗಳು ಮುಕ್ತಾಯವಾದ ತರುವಾಯ ಯಾವುದೇ ಕಾಲದಲ್ಲಿ ಅಂಥ ಪರಿಹಾರ ಕೇಂದ್ರ ಪ್ರಭಾರದಲ್ಲಿರುವ ಅಧಿಕಾರಿಗೆ ಅವನ ಬಂಧನದ ಅವಧಿಯಲ್ಲಿ ಅಂಥ ಕೇಂದ್ರದಲ್ಲಿ ಅಂಥ ಭಿಕ್ಷುಕನ ವರ್ತನೆಯಿಂದ ಅಂಥ ವ್ಯಕ್ತಿಯು ಭಿಕ್ಷೆ ಬೇಡುವುದನ್ನು ನಿಲ್ಲಿಸುವ ಸಾಧ್ಯತೆ ಇದೆ ಎಂದು ಮನದಟ್ಟಾದರೆ ಅವನು ಸರ್ಕಾರಕ್ಕೆ ಅವನನ್ನು ಬೇಷರತ್ತಾಗಿ ಬಿಡುಗಡೆ ಮಾಡಬಹುದೆಂದು ಶಿಫಾರಸ್ಸು ಮಾಡಬಹುದು ಮತ್ತು ಸರ್ಕಾರವು ಬೇಷರತ್ತಾಗಿ ಅಂಥ ವ್ಯಕ್ತಿಯನ್ನು ಬಿಡುಗಡೆ ಮಾಡಲು ಆದೇಶಿಸಬಹುದು ಮತ್ತು ಆ ತರುವಾಯ ಅಂಥ ವ್ಯಕ್ತಿಯನ್ನು ಪರಿಹಾರ ಕೇಂದ್ರದಲ್ಲಿ ಯಾವ ಅವಧಿಗಾಗಿ ಬಂಧನದಲ್ಲಿಡಬೇಕೆಂದು ಆದೇಶವನ್ನು ಮಾಡಲಾಗಿತ್ತೋ ಆ ಅವಧಿಯು ಮುಕ್ತಾಯವಾಗಿರುವುದಾಗಿ ಭಾವಿಸತಕ್ಕುದು.

 

 ರಾಜ್ಯದಲ್ಲಿನ ಪರಿಹಾರ ಕೇಂದ್ರಗಳಿಂದ ಭಾರತದ ಇತರ ರಾಜ್ಯಗಳಲ್ಲಿರುವ ಅಂಥದೇ ಸ್ವರೂಪದ ಸಂಸ್ಥೆಗಳ ನಡುವೆ ವರ್ಗಾವಣೆ:-

 

        (1) ಸರ್ಕಾರವು ಪರಿಹಾರ ಕೇಂದ್ರದ ಪ್ರಭಾರದಲ್ಲಿರುವ ಅಧಿಕಾರಿಯೊಂದಿಗೆ ಸಮಾಲೋಚಿಸಿ ಪರಿಹಾರ ಕೇಂದ್ರ ಅಥವಾ ಅದೇ ಸ್ವರೂಪದ ಸಂಸ್ಥೆಯಲ್ಲಿ ಬಂಧನದಲ್ಲಿಡಬೇಕೆಂದು ಅವನನ್ನು ನಿರ್ದೇಶಿಸುವ ಈ ಅಧಿನಿಯಮದ ಸ್ವರೂಪದ ಸಂಸ್ಥೆಯಲ್ಲಿ ಬಂಧನದಲ್ಲಿಡಬೇಕೆಂದು ಅವನನ್ನು ನಿರ್ದೇಶಿಸುವ ಈ ಅಧಿನಿಯಮದ ಸ್ವರೂಪದ ಆದೇಶವನ್ನು ಭಾರತದಲ್ಲಿನ ಯಾವುದೇ ಇತರ ರಾಜ್ಯದಲ್ಲಿ ಸಕ್ಷಮ ಪ್ರಾಧಿಕಾರಿಯು ಯಾವ ವ್ಯಕ್ತಿಗೆ ಸಂಬಂಧಿಸಿದಂತೆ ಬಂಧನದ ಆದೇಶವನ್ನು ಮಾಡಿರುವನೋ ಆ ವ್ಯಕ್ತಿಯನ್ನು ಆ ಪರಿಹಾರ ಕೇಂದ್ರಕ್ಕೆ ವರ್ಗಾವಣೆ ಮಾಡಲು ಆದೇಶಿಸಬಹುದು ಮತ್ತು ಅಂಥ ವರ್ಗಾವಣೆಯಾದ ಮೇಲೆ ಈ ಅಧಿನಿಯಮದ ಉಪಬಂಧಗಳು, ಅಂಥ ವ್ಯಕ್ತಿಗೆ ಕರ್ನಾಟಕ ರಾಜ್ಯದಲ್ಲಿ ಸಕ್ಷಮ ನ್ಯಾಯಾಲಯವು ಅಂಥ ಪರಿಹಾರ ಕೇಂದ್ರದಲ್ಲಿ ಅವನನ್ನು ಈ ಅಧಿನಿಯಮದ ಮೇರೆಗೆ ಬಂಧಿಸಿಡಲು ನಿರ್ದೇಶಿಸಲಾಗಿದ್ದಿದ್ದರೆ ಹೇಗೋ ಹಾಗೆ ಅನ್ವಯವಾಗತಕ್ಕುದು.

          (2) ಸರ್ಕಾರವು ರಾಜ್ಯದಲ್ಲಿನ ಪರಿಹಾರ ಕೇಂದ್ರದಲ್ಲಿ ಬಂಧಿಸಿಟ್ಟ ಯಾವನೇ ವ್ಯಕ್ತಿಯನ್ನು, ಅಲ್ಲಿಂದ ಭಾರತದಲ್ಲಿನ ಯಾವುದೇ ಇತರ ರಾಜ್ಯದಲ್ಲಿರುವ ಅದೇ ಸ್ವರೂಪದ ಸಂಸ್ಥೆಗೆ ಆ ರಾಜ್ಯದಲ್ಲಿ ಜಾರಿಯಲ್ಲಿರುವ ಈ ಅಧಿನಿಯಮದಂಥದೇ ಆದ ಕಾನೂನಿನ ಉಪಬಂಧಗಳ ಮೇರೆಗೆ ಅದರಲ್ಲಿ ಬಂಧಿಸಿಡಲು ನಿರ್ದೇಶಿಸಬಹುದು.

         ಪರಂತು, ಯಾವನೇ ವ್ಯಕ್ತಿಯನ್ನು ಈ ಪ್ರಕರಣದ ಮೇರೆಗೆ ಇತರ ಯಾವುದೇ ರಾಜ್ಯಕ್ಕೆ ಅಂಥ ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೆ ವರ್ಗಾಯಿಸತಕ್ಕುದಲ್ಲ.

 

  ಅಧಿನಿಯಮದ ಮೇರೆಗಿನ ಅಪರಾಧಗಳು ಸಂಜ್ಞೇಯವಾಗಿರತಕ್ಕುದು:- ಈ ಅಧಿನಿಯಮದ ಮೇರೆಗೆ ಎಲ್ಲಾ ಅಪರಾಧಗಳು ಸಂಜ್ಞೇಯವಾಗಿರತಕ್ಕುದು.

 

 ಜುಲ್ಮಾನೆಗಳು:- ಈ ಅಧಿನಿಯಮದ ಮೇರೆಗಿನ ವಸೂಲು ಮಾಡಲಾದ ಜುಲ್ಮಾನೆಗಳನ್ನು ಕೇಂದ್ರ ಪರಿಹಾರ ನಿಧಿಗೆ ಜಮೆ ಮಾಡತಕ್ಕುದು.

 

          ಈ ಅಧಿನಿಯಮದ ಮೇರೆಗಿನ ಪ್ರಕರಣಗಳಿಗೆ ಆದ್ಯತೆ:- ದಂಡ ಪ್ರಕ್ರಿಯೆ ಸಂಹಿತೆಯ 1973 (ಕೇಂದ್ರಾಧಿನಿಯಮ, 1974ರ ಸಂಖ್ಯೆ 2) ಇದರಲ್ಲಿ ಏನೇ ಅಡಕವಾಗಿದ್ದಾಗ್ಯೂ, ಪ್ರತಿಯೊಂದು ನ್ಯಾಯಾಲಯವು ಸಾಧ್ಯವಾದಷ್ಟು ಮಟ್ಟಿಗೆ ಅಂಥ ನ್ಯಾಯಾಲಯದ ಮುಂದಿರುವ ಯಾವುದೇ ಇತರ ವ್ಯವಹರಣೆಗಳಿಗಿಂತ ಈ ಅಧಿನಿಯಮದ ಮೇರೆಗಿನ ಯಾವುದೇ ವ್ಯವಹರಣೆಗೆ ಅಗ್ರತೆಯನ್ನು ಕೊಡತಕ್ಕುದು.

 

          ಸ್ವತ್ತನ್ನು ಆರ್ಜಿಸುವ ಅಧಿಕಾರ ಇತ್ಯಾದಿ:- ಈ ಬಗ್ಗೆ ರಚಿಸಲಾದ ನಿಯಮಗಳಿಗೊಳಪಟ್ಟು ಕೇಂದ್ರ ಪರಿಹಾರ ಸಮಿತಿ ಅಥವಾ ಯಾವುದೇ ಸ್ಥಳೀಯ ಸಮಿತಿಯು ಸ್ವತ್ತನ್ನು ಅರ್ಜಿಸಲು ಕರಾರುಗಳನ್ನು ಮಾಡಿಕೊಳ್ಳಲು ಕಾನೂನು ವ್ಯವಹರಣೆಗಳನ್ನು ಹೂಡಲು ಹಾಗೂ ಪ್ರತಿವಾದಿಸಲು ಮತ್ತು ಅದಕ್ಕೆ ಪ್ರಾಸಂಗಿಕವಾದ ಇತರ ಎಲ್ಲಾ ಕಾರ್ಯಗಳನ್ನು ಮಾಡಲು ಅಧಿಕಾರವನ್ನು ಹೊಂದಿರತಕ್ಕುದು.

 

         ಅಧಿಕಾರಿಗಳ ನೇಮಕಾತಿ:- ಕೇಂದ್ರ ಪರಿಹಾರ ಸಮಿತಿ ಅಥವಾ ಕೇಂದ್ರ ಪರಿಹಾರ ಸಮಿತಿಯ ಪೂರ್ವ ಮಂಜೂರಾತಿಯೊಂದಿಗೆ ಸ್ಥಳೀಯ ಸಮಿತಿಗಳು ಆ ಬಗ್ಗೆ ನಿಯಮಿಸಿದ ನಿಯಮಗಳಿಗನುಸಾರವಾಗಿ ಅಧಿನಿಯಮದ ಉದ್ದೇಶಕ್ಕಾಗಿ ಅಧಿಕಾರಿಗಳನ್ನು ನೇಮಕ ಮಾಡಬಹುದು.

 

       ಅಧಿಕಾರಿಗಳ ಸಂರಕ್ಷಣೆ:- ಈ ಅಧಿನಿಯಮದ ಮೇರೆಗೆ ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯಕ್ಕಾಗಿ ಯಾವನೇ ವ್ಯಕ್ತಿಯ ವಿರುದ್ಧ ಯಾವುದೇ ದಾವೆಯನ್ನು ಪ್ರ್ರಾಸಿಕ್ಯೂಶನ್ ಅಥವಾ ಇತರ ಕಾನೂನು ವ್ಯವಹರಣೆಯನ್ನು ಹೂಡತಕ್ಕುದಲ್ಲ.

 

          ಲೋಕ ನೌಕರ:-  ಈ ಅಧಿನಿಯಮದ ಮೇರೆಗೆ ಯಾವುದೇ ಪ್ರಕಾರ್ಯವನ್ನು ನೆರವೇರಿಸಲು ಶಕ್ತಗೊಂಡ ಪ್ರತಿಯೊಬ್ಬ ವ್ಯಕ್ತಿಯನ್ನು ಭಾರತ ದಂಡ ಸಂಹಿತೆಯ (ಕೇಂದ್ರಾಧಿನಿಯಮ 1860ರ ಘಿಐಗಿ) 21ನೇ ಪ್ರಕರಣದ ಅರ್ಥವ್ಯಾಪ್ತಿಯಲ್ಲಿ ಲೋಕ ನೌಕರನೆಂದು ಭಾವಿಸತಕ್ಕುದು.

       

ಭಿಕ್ಷಾಟನೆ ಉಪಕರ:-(1) ಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಿಂದ ಜಾರಿಗೆ ಬರುವಂತೆ:-

 (i)     ಭೂಮಿಗಳು ಮತ್ತು ಕಟ್ಟಡಗಳ ಮೇಲೆ;

(ii)    ಸ್ಥಳೀಯ ಪ್ರದೇಶದೊಳಗೆ ಬಳಕೆ, ಉಪಯೋಗ ಅಥವಾ ಮಾರಾಟಕ್ಕಾಗಿ; ಅದರೊಳಗೆ ಬರುವ ಸರಕುಗಳ ಪ್ರದೇಶದ ಮೇಲಿನ ತೆರಿಗೆ;

(iii)    ವಾಹನಗಳ ಮೇಲಣ ತೆರಿಗೆ;

(iv)    ವೃತ್ತಿಗಳು, ವ್ಯಾಪಾರಗಳು, ಅಜೀವಿಕೆಗಳು ಮತ್ತು ನಿಯೋಜನೆಗಳ ಮೇಲಿನ ತೆರಿಗೆ ಇವುಗಳ ಮೇಲೆ ಅಧಿಭಾರದ ರೂಪದಲ್ಲಿ ಭಿಕ್ಷಾಟನಾ ಉಪಕರವನ್ನು ಅಂಥ ತೆರಿಗೆಗಳನ್ನು ವಿಧಿಸುವುದಕ್ಕೆ ಸಂಬಂಧಪಟ್ಟ ಕಾನೂನುಗಳ ಮೇರೆಗೆ ಪ್ರತಿಯೊಂದು ಸ್ಥಳೀಯ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ಹಾಗೆ ವಿಧಿಸಲಾದ ತೆರಿಗೆಗಳ ಪ್ರತಿಯೊಂದು ರೂಪಾಯಿಗಾಗಿ ಮೂರು ಪೈಸೆಯ ದರದಲ್ಲಿ ವಿಧಿಸತಕ್ಕದ್ದು.

 (2) ಉಪಕರವನ್ನು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರವು ಆ ಉಪಕರವು ತತ್ಕಾಲದಲ್ಲಿ ಜಾರಿಯಲ್ಲಿರುವ ಸಂಬಂಧಪಟ್ಟ ಕಾನೂನುಗಳ ಮೇರೆಗೆ ಸಂದಾಯ ಮಾಡಬೇಕಾದ ತೆರಿಗೆಯಾಗಿದ್ದಿದ್ದರೆ ಹೇಗೋ ಹಾಗೆ ಅದನ್ನು ಸಂಗ್ರಹಿಸತಕ್ಕುದು ಮತ್ತು ಸದರಿ ತೆರಿಗೆಯನ್ನು ವಿಧಿಸುವುದಕ್ಕೆ ಮತ್ತು ಸಂಗ್ರಹಿಸುವುದಕ್ಕೆ ಸಂಬಂಧಪಟ್ಟ ಸದರಿ ಕಾನೂನುಗಳ ಉಪಬಂಧಗಳು ನಿಯಮಿಸ ಬಹುದಾದಂಥ ಮಾರ್ಪಾಟುಗಳಿಗೊಳಪಟ್ಟು ಅಂಥ ಉಪಕರವನ್ನು ವಿಧಿಸುವುದಕ್ಕೆ ಮತ್ತು ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಅನ್ವಯವಾಗತಕ್ಕುದು.

 (3) ಸ್ಥಳೀಯ ಪ್ರಾಧಿಕಾರವು ಸಂಗ್ರಹಿಸಿದ ಮೊಬಲಗಿನ ಶೇಕಡಾ ಹತ್ತರಷ್ಟನ್ನು ಸಂಗ್ರಹಣದ ಖರ್ಚೆಂದು ಕಳೆದುಕೊಳ್ಳಲು ಹಕ್ಕುಳ್ಳದಾಗಿರತಕ್ಕುದು ಮತ್ತು ಶಿಲ್ಕನ್ನು ಸರ್ಕಾರವು ನಿರ್ದೇಶಿಸಬಹುದಾದಂಥ ಕಾಲದೊಳಗೆ ಮತ್ತು ಅಂಥ ರೀತಿಯಲ್ಲಿ 30ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೇರೆಗೆ ರಚಿಸಿದ ಸಮಿತಿಗೆ ಸಂದಾಯ ಮಾಡತಕ್ಕುದು.

 

 

ಇತ್ತೀಚಿನ ನವೀಕರಣ​ : 10-08-2021 03:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೇಂದ್ರ ಪರಿಹಾರ ಸಮಿತಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080